ರುಯೀಸ್, ಜುವಾನ್
ಸು. 1283-1350. ಸ್ಪ್ಯಾನಿಷ್ ಕವಿ. ಈಟಾದ ಆರ್ಚ್‍ಬಿಷಪ್ ಆಗಿದ್ದ. ಚರ್ಚ್ ನಿಯಮೋಲ್ಲಂಘನೆಯ ಆಪಾದನೆಯ ಮೇರೆಗೆ 1333-47ರ ಅವಧಿಯಲ್ಲಿ ಕಾರಾಗೃಹದಲ್ಲಿದ್ದು ದನ್ನು ಬಿಟ್ಟು ಉಳಿದಂತೆ ಈತನ ಜೀವಿತ ವಿವರಗಳು ತಿಳಿದುಬಂದಿಲ್ಲ. ಆತ್ಮಕಥೆಯ ರೂಪದಲ್ಲಿರುವ ಬುಕ್ ಆಫ್ ಗುಡ್‍ಲವ್ (1333-47), ನೈಜಪ್ರೇಮದ ಪುಸ್ತಕ)-ಇವನ ಏಕೈಕ ಕೃತಿ. ಇದು ಮಧ್ಯಕಾಲೀನ ಸ್ಪ್ಯಾನಿಷ್ ಸಾಹಿತ್ಯದ ಮಾನವೀಯ ಕೃತಿ ಎಂದು ಖ್ಯಾತವಾಗಿದೆ. ಮಧ್ಯಯುಗದಲ್ಲಿ ಪ್ರಚಲಿತವಿದ್ದ ಜೀವನದ ರೀತಿನೀತಿಗಳನ್ನು ಈ ಕಾವ್ಯದಲ್ಲಿ (ಪದ್ಯ ಮತ್ತು ಗೀತೆಯ ರೂಪದಲ್ಲಿ) ರಸಭರಿತವಾಗಿ ನಿರೂಪಿಸಲಾಗಿದೆ.

ಪ್ರೇಮದಲ್ಲಿ ನಿಷ್ಕಾಮವಾದುದು ಮತ್ತು ಕಾಮಪ್ರೇರಿತವಾದುದು ಎಂಬ ಎರಡು ಬಗೆಯುಂಟೆಂದೂ ಲೌಕಿಕ ಪ್ರೇಮದಲ್ಲಿ ಕಾಮವಿದ್ದರೂ ಅದು ತುಚ್ಛವಾದುದಲ್ಲವೆಂದೂ ಅದರಲ್ಲಿ ಉತ್ತಮ ಮತ್ತು ನೀಚವೆಂಬ ತರತಮ ಉಂಟೆಂದೂ ತಿಳಿಸಿ ಅನಂತರ ಕವಿ ಎಲ್ಲ ಬಗೆಯ ಪ್ರೇಮ ಪ್ರಸಂಗಗಳನ್ನೂ ರಸವತ್ತಾಗಿ ನಿರೂಪಿಸಿದ್ದಾನೆ. ಕವಿಯ ಮೊದಲ ಎರಡು ಪ್ರಸಂಗಗಳು ಭಗ್ನಪ್ರಣಯಗಳು. ಅನಂತರ ಪ್ರೇಮದೇವತೆ ಪ್ರತ್ಯಕ್ಷವಾಗಿ ಪುರುಷ ತಾನು ಮೆಚ್ಚುವ ಯುವತಿಯನ್ನು ಒಲಿಸಿಕೊಳ್ಳುವ ಬಗೆಯನ್ನು ಉಪದೇಶಿಸುತ್ತಾನೆ. ಇಲ್ಲಿ ಓವಿಡ್ (ಕ್ರಿಪೂ.43-ಕ್ರಿಶ.17?)  ಕವಿಯ ಪ್ರಭಾವ ಇವನ ಮೇಲೆ ಆಗಿರುವುದನ್ನು ನಾವು ಗುರುತಿಸ ಬಹುದಾಗಿದೆ. ಅನಂತರ ಕವಿ ಡೋನ್ಯ ಏಂಡ್ರೀಸಾ ಎಂಬ ಸುಂದರ ಶ್ರೀಮಂತ ವಿಧವೆಯಲ್ಲಿ ಅನುರಕ್ತನಾಗಿ, ಟ್ರೋಟಾ ಕೋಂವೆಂಟೋಸ್ ಎಂಬ ನುರಿತ ಕುಂಟಣಿಯೊಬ್ಬಳ ನೆರವಿನಿಂದ ಆಕೆಯನ್ನು ವಶಪಡಿಸಿಕೊಳ್ಳುತ್ತಾನೆ. ಕುಂಟಣಿಯ ಪಾತ್ರ ವಿಸ್ತಾರವಾಗಿಯೂ ವೈವಿಧ್ಯಮಯವಾಗಿಯೂ ಸ್ವಾರಸ್ಯಕರವಾಗಿಯೂ ಚಿತ್ರಿತವಾಗಿದೆ (ಮುಂದೆ ಈ ಬಗೆಯ ಚಿತ್ರಣ ಲಾ ಸೆಲೆಸ್ಟೀನಾ ಎಂಬ ಕೃತಿ ಬರಲು ಪ್ರೇರಣೆಯೊದಗಿಸಿತು).

ಕವಿಗೆ ಪ್ರಯಾಣ ಮಾರ್ಗದಲ್ಲಿ ಹಲವಾರು ಕುರುಬ ಹೆಂಗಸರೊಡನೆ ಅಪೇಕ್ಷಿತ ಮತ್ತು ಅನಪೇಕ್ಷಿತ ಪ್ರಣಯ ಪ್ರಸಂಗಗಳು ಒದಗುವುವು. ಈ ವರ್ಣನೆಗಳ ಉದ್ದೇಶ ಪ್ರಾಯಃ ಗೊಲ್ಲ ಸಾಹಿತ್ಯದಲ್ಲಿ ಬರುವ ಶ್ರೀಮಂತ ಸ್ತ್ರೀಯರ ಆದರ್ಶ ಚಿತ್ರಗಳ ವಿಡಂಬನೆಯಿರಬೇಕು. ಕವಿ ಭಗ್ನಪ್ರಣಯಿ, ಸ್ತ್ರೀ ಶೀಲಭಂಗ, ಸ್ತ್ರೀಯರ ಕಾಮತೃಷೆಗೇ ಸಿಕ್ಕಿಬಿದ್ದ ಅಸಹಾಯಕ-ಈ ಮೂರೂ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಪ್ರೇಮ ನಿರೂಪಣೆಯಲ್ಲಿ ರೊಮ್ಯಾಂಟಿಕ್ ದೃಷ್ಟಿಗೆ ವಿರುದ್ಧವಾಗಿ ವಾಸ್ತವಿಕ ದೃಷ್ಟಿ ಎದ್ದು ಕಾಣುತ್ತದೆ. ವೀರ ಸಂಪ್ರದಾಯದ ಮತ್ತು ಚರ್ಚಿನ ಪಾದ್ರಿಗಳ ಭ್ರಷ್ಟಾಚಾರದ ಭಂಡಬದುಕಿನ ವಿಡಂಬನೆ ಕೂಡ ಅಲ್ಲಲ್ಲಿ ಕಂಡುಬರುತ್ತದೆ.
(ಎಂ.ಕೆ.ಕೆ;ಆರ್.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ